ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ನಾಲ್ಕನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 48 ರನ್ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಪಡೆ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ.
ಹೆರಿಟೇಜ್ ಬ್ಯಾಂಕ್ ಕ್ರೀಡಾಂಗಣದಲ್ಲಿ ನಡೆದ ಉಭಯ ತಂಡಗಳ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 167 ರನ್ ಕಲೆಹಾಕಿತು. ತಂಡದ ಪರ ಶುಭ್ಮನ್ ಗಿಲ್ ಅತ್ಯಧಿಕ 46 ರನ್ಗಳ ಇನ್ನಿಂಗ್ಸ್ ಆಡಿದರು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 119 ರನ್ಗಳಿಗೆ ತನ್ನೇಲ್ಲ ವಿಕೆಟ್ ಕಳೆದುಕೊಂಡು 48 ರನ್ಗಳ ಹೀನಾಯ ಸೋಲು ಅನುಭವಿಸಿತು.
ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸರಣಿ ಸೋಲಿನಿಂದ ಪಾರಾಗಿದೆ. ಏಕೆಂದರೆ ಉಳಿದಿರುವ ಒಂದು ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಸರಣಿ ಅದರ ಕೈಸೇರಲಿದೆ. ಒಂದು ವೇಳೆ ಸೋತರೆ ಸರಣಿ 2-2 ರಿಂದ ಸಮಬಲಗೊಳ್ಳಲಿದೆ.
ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಆ ಬಳಿಕ ನಡೆದಿದ್ದ ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು. ನಂತರ ನಡೆದ ಮೂರನೇ ಟಿ20 ಪಂದ್ಯವನ್ನು 5 ವಿಕೆಟ್ಗಳಿಂದ ಗೆದ್ದುಕೊಂಡಿದ್ದ ಸೂರ್ಯಕುಮಾರ್ ಪಡೆ, ಇದೀಗ ನಾಲ್ಕನೇ ಟಿ20 ಪಂದ್ಯದಲ್ಲಿ ಏಕಪಕ್ಷೀಯ ಗೆಲುವು ದಾಖಲಿಸಿದೆ.


